ನಳ ವಂಶ -
ಕರ್ನಾಟಕದ ಚಿಕ್ಕ ರಾಜಮನೆತನಗಳಲ್ಲಿ ಒಂದು. ಈಗಿನ ಬಳ್ಳಾರಿ-ಕರ್ನೂಲು ಪ್ರದೇಶ ನಳವಾಡಿ ವಿಷಯ ಎಂದು ಹೆಸರು ಪಡೆದಿದ್ದು, ನಳರ ರಾಜ್ಯವಾಗಿತ್ತು. ಇದು ನಳರಾಜ್ಯದ ದಕ್ಷಿಣ ಪ್ರಾಂತ್ಯವಾಗಿದ್ದಿರಬಹುದೆಂಬ ಅಭಿಪ್ರಾಯವೂ ಇದೆ. ಕಳಿಂಗ ದೇಶದಲ್ಲಿ ದೊರಕಿರುವ ಕೆಲವು ತಾಮ್ರಶಾಸನಗಳಿಂದ ಅಲ್ಲಿಯೂ ನಳರು ಆಳ್ವಿಕೆ ನಡೆಸಿದ್ದರೆಂದು ಊಹಿಸಬಹುದಾಗಿದೆ. ನಳರು ತಮ್ಮ ಉತ್ಕರ್ಷಕಾಲದಲ್ಲಿ ಮಧ್ಯಪ್ರದೇಶದ ಬಸ್ತಾರ್ ಸಂಸ್ಥಾನದ ವರೆಗೂ ಅಧಿಕಾರ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು. ಜೈಪುರದ ಪೋಡಾಗಡ ಪ್ರದೇಶದಲ್ಲಿ ಇದ್ದಿರಬಹುದಾದ ಪುಷ್ಕರಿ ನಗರ ನಳರ ರಾಜಧಾನಿಯಾಗಿತ್ತು. ನಳರು ನಿಷಧ ದೇಶದ ದೊರೆ ನಳಮಹಾರಾಜನ ವಂಶೀಯರಿರಬಹುದೆಂದೂ ಊಹಿಸಲಾಗಿತ್ತು.

ನಳನೃಪವಂಶಪ್ರಸೂತ ಎಂಬ ಬಿರುದು ಪಡೆದಿದ್ದ ಭವತ್ತವರ್ಮ ಅಥವಾ ಭವದತ್ತವರ್ಮ ಬಸ್ತಾರ್-ಜೈಪುರ ಸೀಮೆ ಹಾಗೂ ಬಳ್ಳಾರಿ-ಕರ್ನೂಲು ಪ್ರದೇಶದಲ್ಲಿ ಆಳಿದ ನಳರ ಮೂಲಪುರುಷನೆಂದು ಶಾಸನಗಳು ತಿಳಿಸುತ್ತವೆ. ಭವದತ್ತವರ್ಮ ಮಹೇಶ್ವರ (ಶಿವ) ಮತ್ತು ಮಹಾಸೇನ (ಸ್ಕಂದ ಕಾರ್ತಿಕೇಯ) ದೇವತೆಗಳನ್ನು ಆರಾಧಿಸಿ ಪ್ರಭುತ್ವ ಪಡೆದನೆಂದು ಶಾಸನಗಳಿಂದ ತಿಳಿದುಬರುತ್ತದೆ.

ಐದನೇ ಶತಮಾನದ ಉತ್ತರಾರ್ಧದಲ್ಲಿ ನಳ ರಾಜವಂಶ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಶಾಸನಗಳಿಂದ ವ್ಯಕ್ತವಾಗುತ್ತದೆ. ಆರನೆಯ ಶತಮಾನದ ಪೂರ್ವಾರ್ಧದಲ್ಲಿ ನಳರು ವಾಕಾಟಕರನ್ನು ಮೂಲೆಗೊತ್ತಲು ಪ್ರಯತ್ನಿಸಿದರು. ಇದರಿಂದಾಗಿ ವಾಕಾಟಕ ದೊರೆ ಇಮ್ಮಡಿ ಪೃಥ್ವಿಸೇನನಿಗೂ ನಳ ವಂಶದ ಭವದತ್ತ ವರ್ಮನಿಗೂ ಹೋರಾಟ ನಡೆದಿದ್ದಿರಬಹುದೆಂದು ಊಹಿಸಬಹುದಾಗಿದೆ.

ಭವದತ್ತವರ್ಮನ ಪುತ್ರ ಸ್ಕಂದವರ್ಮ ನಳರ ಅಧಿಕಾರವನ್ನು ವಿಸ್ತರಿಸಿ, ನಿರ್ಜನವಾಗಿದ್ದ ಪುಷ್ಕರಿ ನಗರವನ್ನು ಪ್ರಸಿದ್ಧಿಗೆ ತಂದನೆಂದು ಜೈಪುರದ ಪೊಡಾಗಡ (ಕೋರಾಪುಟ್ ಜಿಲ್ಲೆ) ಶಾಸನ ತಿಳಿಸುತ್ತದೆ. ಸ್ಕಂದವರ್ಮ ಪೊಡಾಗಡದಲ್ಲಿ ವಿಷ್ಣು ದೇವಾಲಯವನ್ನು ನಿರ್ಮಿಸಿದನೆಂದೂ ತಿಳಿದುಬರುತ್ತದೆ. ಆದರೆ, ನಳರ ರಾಜ್ಯ ವಿಸ್ತರಣಾ ಪ್ರಯತ್ನ ಬಹುಕಾಲ ನಡೆಯದಾಯಿತು. ಆಗ ಪ್ರಬಲರಾಗಿದ್ದ ವಾಕಾಟಕರು ಇದನ್ನು ಸಹಿಸಲಿಲ್ಲ. ಭವದತ್ತವರ್ಮನೊಡನೆ ಕಾದಾಡಿದ ವಾಕಾಟಕ ದೊರೆ ಇಮ್ಮಡಿ ಪೃಥ್ವಿಸೇನನೇ ಮತ್ತೆ ನಳರನ್ನು ಸೋಲಿಸಿದನೆಂದು ಅಭಿಪ್ರಾಯಪಡಲಾಗಿದೆ. ಪಶ್ಚಿಮ ಸಮುದ್ರ ಲಕ್ಷ್ಮಿ ಎಂದು ಶಾಸನೋಕ್ತವಾದ ನಳರಾಜಧಾನಿ ಪುಷ್ಕರಿ ವೈರಿಗಳ ವಶವಾಯಿತು. ದಕ್ಷಿಣ ಕೋಸಲದ ಪಾಂಡುವಂಶದ ದೊರೆ, ನನ್ನನೂ ನಳ ವಂಶದ ಸ್ಕಂದವರ್ಮನೂ ಶತ್ರುಗಳಾಗಿದ್ದರೆಂದು ಶಾಸನಗಳಿಂದ ತಿಳಿದು ಬರುತ್ತದೆ.

ನಳರನ್ನು ಸೋಲಿಸಿ ಅವರ ರಾಜಧಾನಿಯನ್ನು ಪಾಳುಗೆಡವಿದ ರಾಜ ಯಾರು ? ಎಂಬ ವಿಚಾರದಲ್ಲಿ ಮತಭೇದವಿದೆ. ನಳರು ಚಾಳುಕ್ಯ ದೊರೆಗಳ ಕುಲವೈರಿಗಳೆಂದು ಐತಿಹ್ಯವಿದೆ. ನಳರ ಪರಾಜಯದ ಕಾಲಮಾನವನ್ನು ಪರಿಶೀಲಿಸಿದಾಗ, ಚಾಳುಕ್ಯ ಸಾಮ್ರಾಜ್ಯದ ಅರಸನಾದ ಒಂದನೆಯ ಕೀರ್ತಿವರ್ಮನೇ (576-597) ಅವರನ್ನು ಸೋಲಿಸಿರಬಹುದೆಂದು ಹೇಳಬಹುದು. ಕೀರ್ತಿವರ್ಮ ನಳರನ್ನು ಸದೆಬಡಿದು ಅವರ ರಾಜ್ಯವಾದ ನಳವಾಡಿ ವಿಷಯವನ್ನು ಧ್ವಂಸ ಮಾಡಿದನೆಂದು ಶಾಸನಗಳಲ್ಲಿ ಹೇಳಿದೆ. ಐಹೊಳೆಯ ಶಿಲಾಶಾಸನದಲ್ಲಿ ಒಂದನೆಯ ಕೀರ್ತಿವರ್ಮನನ್ನು ನಳರ, ಮೌರ್ಯರ, ಕದಂಬರ ಕಾಳರಾತ್ರಿ ಎಂದು ಕರೆಯಲಾಗಿದೆ. ನಳರ ನಳವಾಡಿ ವಿಷಯ ಚಾಳುಕ್ಯ ರಾಜ್ಯದಲ್ಲಿ ವಿಲೀನವಾಯಿತು. 

ಚಾಳುಕ್ಯ ದೊರೆಗಳಿಂದ ಮೇಲಿಂದ ಮೇಲೆ ದಾಳಿಗೆ ತುತ್ತಾದ ನಳರು ನಿರ್ವೀರ್ಯರಾಗುತ್ತ ಬಂದರು. ಆದರೂ ಏಳನೆಯ ಶತಮಾನದ ವೇಳೆಗೆ ದಕ್ಷಿಣ ಕೋಸಲವನ್ನು ಗೆದ್ದು ತಮ್ಮ ಸ್ಥಾನಮಾನಗಳನ್ನು ಊರ್ಜಿತಗೊಳಿಸಿಕೊಳ್ಳಲು ಪ್ರಯತ್ನಿಸಿದರೆಂದು ತಿಳಿದುಬರುತ್ತದೆ. ಹತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ, ಸೋಮವಂಶೀ ರಾಜರು ತಲೆ ಎತ್ತುವ ವರೆಗೆ ನಳರು ದಕ್ಷಿಣ ಕೋಸಲದಲ್ಲಿ ಅಧಿಕಾರ ನಡೆಸಿದರೆ? ಎಂಬುದು ಸರಿಯಾಗಿ ತಿಳಿದುಬರುವುದಿಲ್ಲ. ಒಟ್ಟಿನಲ್ಲಿ ಕರ್ನಾಟಕದ ಮಧ್ಯ ಮತ್ತು ಪಶ್ಚಿಮ ಪ್ರದೇಶಗಳ ಚರಿತ್ರೆಯಲ್ಲಿ ಪಾತ್ರ ವಹಿಸಿದ್ದ ನಳರು ಕ್ರಮೇಣ ಶಕ್ತಿಹೀನರಾಗಿ ಹನ್ನೊಂದನೆಯ ಶತಮಾನದ ವೇಳೆಗೆ ನಾಮಾವಶೇಷರಾದರು.

ನಳವಂಶದ ಭವದತ್ತ, ಅರ್ಥಪತಿ ವರಾಹ ಮುಂತಾದ ದೊರೆಗಳು ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದರೆಂದು ತಿಳಿದುಬರುತ್ತದೆ. ಬಸ್ತಾರ್ ರಾಜ್ಯದ ಎಡೆಂಗ ಎಂಬ ಹಳ್ಳಿಯಲ್ಲಿ ಈ ರಾಜರ ಅನೇಕ ನಾಣ್ಯಗಳು ಸಿಕ್ಕಿವೆ.	
     (ಜಿ.ಎಂ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ